ಕನಕಗಿರಿ : ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಒಂದು ಗ್ರಾಮ. ಗಂಗಾವತಿಗೆ ಸು. 21 ಕಿಮೀ ಉತ್ತರದಲ್ಲಿ ಲಿಂಗಸುಗೂರು ಮಾರ್ಗದಲ್ಲಿದೆ. ಈ ಗ್ರಾಮದ ಮೂರು ದಿಕ್ಕುಗಳನ್ನು ಇಲ್ಲಿ ಹರಿಯುವ ಎರಡು ತೊರೆಗಳು ಸುತ್ತುವರಿದಿವೆ. ಕಣ್ಣಿದ್ದವರು ಕನಕಗಿರಿ ನೋಡಬೇಕೆಂಬುದು ಆ ಭಾಗದಲ್ಲಿನ ಜನವಾಣಿ. ಇದು ಈ ಊರಿನ ದೇವಾಲಯಗಳ ಪ್ರೇಕ್ಷಣೀಯತೆಯನ್ನು ಸೂಚಿಸುತ್ತದೆ. ಇಲ್ಲಿಯ ಕನಕಾಚಲಸ್ವಾಮಿಯ ದೇವಸ್ಥಾನದಲ್ಲಿ ಹಳೆಯ ಕಾಲದಿಂದಲೂ ಜಾತ್ರೆಯ ಮೂರು ದಿನಗಳಲ್ಲಿ ಹರಿಜನರನ್ನು ದೇವರ ದರ್ಶನಕ್ಕೆ ಬಿಡುವ ಪರಂಪರೆಯಿತ್ತು. ಹರಿಜನರಿಗಾಗಿಯೇ ಈ ದೇವರು ಇಲ್ಲಿ ನೆಲಸಿದನೆಂಬ ಪ್ರತೀತಿ ಇದೆ. ಇಲ್ಲಿನ ರಥೋತ್ಸವ ಪ್ರತಿವರ್ಷ ಫಾಲ್ಗುಣ ಬಹುಳ ಸಪ್ತಮಿಯಂದು ನಡೆಯುತ್ತದೆ.

ಕನಕನೆಂಬ ಮುನಿ ಇಲ್ಲಿ ತಪಸ್ಸು ಮಾಡಿದನೆಂದು ಹೇಳುವರು. ವಿಜಯದಾಸರು ಕ್ಷೇತ್ರ ಸುಳಾದಿಯಲ್ಲಿಯೂ ಈ ವಿಚಾರ ಹೇಳಿದ್ದಾರೆ. ಕನಕಗಿರಿಯ ಉತ್ತರ ದಕ್ಷಿಣ ಪ್ರದೇಶದಲ್ಲಿ (ಮಸ್ಕಿ, ಕೊಪ್ಪಳ) ಅಶೋಕನ ಶಾಸನಗಳು ದೊರೆತಿದ್ದು ಮತ್ತು ಕನಕಗಿರಿ ವ್ಯಾಪಾರೀ ಮಾರ್ಗದಲ್ಲಿ ಇರುವುದನ್ನು ನೋಡಿದರೆ ಈ ಊರೇ ಅಶೋಕನ ದಕ್ಷಿಣದ ಕಾರ್ಯಕೇಂದ್ರವಾಗಿದ್ದ ಸುವರ್ಣಗಿರಿ ಎಂಬ ಊಹೆಗೆ ಅವಕಾಶ ಮಾಡಿಕೊಡುತ್ತದೆ. ಎರಡನೆಯ ಶತಮಾನದ ಟಾಲೆಮಿಯ ಭೂಗೋಳದಲ್ಲಿ ಭೀಮಾನದಿ ಹಾಗೂ ಬನವಾಸಿಗಳ ನಡುವಣ ಮಾರ್ಗದಲ್ಲಿ ಬರುವ ಊರುಗಳನ್ನು ಹೆಸರಿಸುವಲ್ಲಿ ಹೇಳಿರುವ ‘ಕಲ್ಲಿಗೇರಿಸ್’ ಕನಕಗಿರಿ ಇರಬಹುದೆಂದು ಊಹಿಸಲಾಗಿದೆ. 15-17ನೆಯ ಶತಮಾನಗಳ ಅವದಿsಯಲ್ಲಿ ಈ ಊರು ಒಂದು ಪಾಳೆಯಪಟ್ಟಿನ ಕೇಂದ್ರವಾಗಿತ್ತು.

ಕನಕಗಿರಿಯ ಪಾಳೆಯಗಾರರು: ಇವರ ಇತಿಹಾಸ 15ನೆಯ ಶತಮಾನದ ಮಧ್ಯದಲ್ಲಿ ಆರಂಭವಾಗುತ್ತದೆ. ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ 12 ಗ್ರಾಮಗಳನ್ನು ಉಂಬಳಿಯಾಗಿ ಪಡೆದ ಗುಜ್ಜಲ ವಂಶದ ಪರಸಪ್ಪನಾಯಕ ಇಲ್ಲಿನ ಕನಕಾಚಲ ಲಕ್ಷ್ಮೀನರಸಿಂಹ ದೇವರ ಗರ್ಭಾಲಯವನ್ನು ಕಟ್ಟಿಸಿ ಹೊಸ ಊರಿನ ಸ್ಥಾಪನೆಗೆ ಕಾರಣನಾದ. ಇವನ ವಂಶದ ನಾಯಕರು ಮುಂದೆ ಪ್ರಬಲರಾಗಿ 40ಲಕ್ಷ ವರಹಗಳ ಆದಾಯದ ಪ್ರಾಂತ್ಯವನ್ನು ಗಳಿಸಿಕೊಂಡು ವಿಜಯನಗರದ ನರಪತಿಗಳ ಬಲಪಾಶರ್ವ್‌ದ ಮರ್ಯಾದೆಗಳನ್ನು ಹೊಂದಿದ ಪಾಳೆಯಗಾರರಾಗಿದ್ದರು. ಕೃಷ್ಣ ದೇವರಾಯನ ಆಮುಕ್ತಮಾಲ್ಯದ ಗ್ರಂಥದಲ್ಲಿ ಕನಕಗಿರಿಯ ಪ್ರಸ್ತಾಪವಿದೆ. ವಿಜಯನಗರ ನಾಶವಾದ ಅನಂತರ ಈ ನಾಯಕರಲ್ಲಿ ಕೆಲವರು ಬಿಜಾಪುರದ ಪರವಾಗಿಯೂ ಹೋರಾಡಿದಂತೆ ದಾಖಲೆಗಳಿವೆ. ವಿಜಯನಗರದ ಅರಸರಾದ ಸಾಳುವ ನರಸಿಂಹ, ಕೃಷ್ಣದೇವರಾಯ, ಅಚ್ಯುತರಾಯ ಇವರೆಲ್ಲ ಕನಕಗಿರಿಯ ದೇವಸ್ಥಾನಕ್ಕೆ ಗ್ರಾಮಗಳನ್ನು ದತ್ತಿ ಕೊಟ್ಟದ್ದಕ್ಕೆ ಕನಕಾಚಲ ದೇವಸ್ಥಾನದಲ್ಲಿ ಶಿಲಾಶಾಸನಗಳಿವೆ. ಶ್ರೀಮತ್ ಸ್ವರ್ಣಗಿರೀಶಸ್ಯ ನಾರಸಿಂಹಸ್ಯ ಶಾಸನಂ ಎಂಬುದು ಈ ಶಾಸನಗಳ ಪ್ರಾರಂಭ ಶ್ಲೋಕಭಾಗ.
ಪರಸಪ್ಪನಾಯಕನ ಮಗ ನವಾಬ ಉಡಿಚಿನಾಯಕ ಪ್ರಭಾವಶಾಲಿ ದೊರೆಯಾಗಿದ್ದ. ಏಳು ಗ್ರಾಮಗಳನ್ನು ಸೇರಿಸಿ ಕನಕಗಿರಿಯನ್ನು ಈತ ವಿಸ್ತರಿಸಿದ. ಗಂಗಾವತಿ ಹತ್ತಿರವಿರುವ ಎಮ್ಮೀಗುಡ್ಡದಲ್ಲಿ ಈತ ಕೋಟೆ ಕಟ್ಟಿಸಿದ. ಕನಕಗಿರಿಯಲ್ಲೇ ಮುನ್ನೂರಕ್ಕಿಂತ ಹೆಚ್ಚು ದೇವಾಲಯಗಳನ್ನು ಕಟ್ಟಿಸಿದನಂತೆ. ಇಲ್ಲಿನ ಮುಖ್ಯ ದೇವಾಲಯದ ಪ್ರಾಕಾರ, ಗೋಪುರಗಳನ್ನೆಲ್ಲ ಈತನೇ ಕಟ್ಟಿಸಿದ. ಈ ದೇವಾಲಯದಲ್ಲಿರುವ ಮಧ್ಯರಂಗ ಶಿಲ್ಪಕಲೆಯ ಒಂದು ಅದ್ಭುತ. ಇದು 54’ ಉದ್ದ ಹಾಗೂ 36’ ಅಗಲವಿರುವ ಒಂದು ನಾಟ್ಯ ಶಾಲೆ. ಮಧ್ಯ ಯಾವ ಆಧಾರವÆ ಇಲ್ಲದೆ ಪಕ್ಕದ ಸಿಂಹಸ್ತಂಭಗಳ ಮೇಲೆ ನಿಂತಿದೆ. ನವಾಬ ಉಡಿಚಿನಾಯಕನ ಮಗ ಕೆಲವಡಿ ಉಡಿಚಿನಾಯಕ ಹಾಗೂ ಅವನ ರಾಣಿಯರು ದೇವಸ್ಥಾನಗಳಲ್ಲೆಲ್ಲ ಸುಂದರವಾದ ಪೌರಾಣಿಕ ಪ್ರತಿಮೆಗಳನ್ನು ಮಾಡಿಸಿದರು. ಅನಂತರ ಬಂದ ಕನಕಯ್ಯ ಉಡಿಚಿನಾಯಕ ಊರಿನ ಎರಡು ಬದಿಯಲ್ಲಿ ವಿಶಾಲವಾದ ಪುಷ್ಕರಣಿಗಳನ್ನೂ ಅವನ ತಮ್ಮನಾದ ವೆಂಕಟಪ್ಪನಾಯಕ ಜಲಕ್ರೀಡಾ ಮಹಲನ್ನೂ (ವೆಂಕಟಪತಿ ಬಾವಿ) ಕಟ್ಟಿಸಿದ. ಹಂಪೆಯ ವಿರೂಪಾಕ್ಷ ದೇವಾಲಯದ ಉತ್ತರ ದಿಕ್ಕಿನ ಗೋಪುರ ಕನಕಗಿರಿಯ ನಾಯಕರು ಕಟ್ಟಿಸಿದ್ದು.

ಅನಂತರ ಬಂದ ಹೀರೇ ರಂಗಪ್ಪನಾಯಕ ಕವಿಗಳಿಗೂ ಪಂಡಿತರಿಗೂ ಆಶ್ರಯವಿತ್ತಿದ್ದ. ಕನ್ನಡದಲ್ಲಿ ಭಟ್ಟಂಗಿ ದಂಡಕಗಳನ್ನು ರಚಿಸಿರುವ ಹಾಗೂ ಘಳಿಗೆಯಲ್ಲಿ ನೂರು ಶ್ಲೋಕ ರಚಿಸಬಲ್ಲನೆಂಬ ಖ್ಯಾತಿಯಿದ್ದ ಜಯವೆಂಕಟಾಚಾರ್ಯ, ಶ್ರೀಕೃಷ್ಣಪಾರಿಜಾತ ನಾಟಕ ರಚಿಸಿದ ಅಪರಾಳ ತಮ್ಮಣ್ಣ, ಚಿದಾನಂದ ಅವಧೂತ ಇವರು ಈ ಪಾಳೆಗಾರನ ಆಶ್ರಯದಲ್ಲಿದ್ದವರು.

ಕೊನೆಯ ಪಾಳೆಯಗಾರ ಹಿರೇನಾಯಕನ ಕಾಲದಲ್ಲಿ ಕನಕಗಿರಿ ರಾಜ್ಯ ಹರಿಹರ ದಾವಣಗೆರೆಯವರೆಗೆ ಬೆಳೆದಿತ್ತು. ಆದರೆ ಸುತ್ತಲಿನ ಶತ್ರುಗಳ ಬಗ್ಗೆ ಇವನಿಗೆ ಎಚ್ಚರವಿರಲಿಲ್ಲ. ಹೈದರಾಬಾದಿನ ನಿಜಾಮ ಕನಕಗಿರಿಯ ನಾಯಕನ ಬಂಧುವೇ ಆದ ಸುರಪುರದ ಪಾಮನಾಯಕನ ಮೂಲಕ ಕನಕಗಿರಿಯ ಮೇಲೆ ದಾಳಿ ಮಾಡಿಸಿ ನಾಯಕನನ್ನು ಸೆರೆಹಿಡಿಸಿ ಹೈದರಾಬಾದಿನಲ್ಲಿ ಕೊಲ್ಲಿಸಿದ. ನಾಯಕನ ಮನೆತನಕ್ಕೆ 16 ಹಳ್ಳಿಗಳನ್ನು ಮಾತ್ರ ಕೊಡಲಾಯಿತು. ಸುರಪುರದ ಪಾಮನಾಯಕನಿಗೆ ಕನಕಗಿರಿಯನ್ನು ದಮನ ಮಾಡಿದುದಕ್ಕಾಗಿ ರುಸೂಮು, ಜಾಗೀರಿಗಳು ಸಿಕ್ಕವು. ಆದರೆ ಅನತಿ ಕಾಲದಲ್ಲೇ ಸುರಪುರದ ಗತಿಯೂ ಕನಕಗಿರಿಯಂತೆಯೇ ಆಯಿತು.

ಕನಕಗಿರಿಯ ಮೇಲೆ ಟಿಪ್ಪುವಿನ ದಾಳಿಯೂ ಒಮ್ಮೆ ಆದಂತೆ, ಅಲ್ಲದೆ ಈ ನಾಯಕರು ಮರಾಠರನ್ನೂ ಎದುರಿಸಿದಂತೆ ದಾಖಲೆಗಳಿವೆ.	(ಜೆ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ